ಕ್ಯಾಪ್‍ಸ್ಟನ್ ಚರಕಿಯಂತ್ರ

ಹಲ್ಲಣಕ್ಕೆ (ಸ್ಯಾಡಲ್) ಆನಿಸಿರುವ ಸಹಾಯಕ ಜಾರುಪೀಠಕ್ಕೆ ಲಗತ್ತಿಸಿರುವ, ಸ್ವಯಂ ಆವರ್ತಿಸಬಲ್ಲ ಶೀರ್ಷಕದ ಅನೇಕ ಆಯುಧಗಳು ಪರ್ಯಾಯವಾಗಿ ಕಡೆಯಲು ಏರ್ಪಾಡು ಇರುವ ಕಡೆತಯಂತ್ರ.. ಒಂದೇ ರೀತಿಯ ಬಿಡಿಭಾಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಕರಾರುವಾಕ್ಕಾಗಿ ತಯಾರಿಸಲು ಇದನ್ನು ಉಪಯೋಗಿಸುತ್ತಾರೆ. ಸಾಮಾನ್ಯ ಕಡೆತ ಯಂತ್ರದಲ್ಲಿರುವ ಜಲಶೀರ್ಷಕ (ಟೇಲ್ ಸ್ಟಾಕ್) ಈ ಯಂತ್ರದಲ್ಲಿರುವುದಿಲ್ಲ. ಇದರ ಬದಲು ಯಂತ್ರಪೀಠಕ್ಕೆ (ಬೆಡ್) ಒಂದು ಹಲ್ಲಣವನ್ನು ಜೋಡಿಸಿದೆ. ಇದನ್ನು ಪೀಠದ ಉದ್ದಕ್ಕೂ ಒಯ್ಯಬಹುದು. ಈ ಹಲ್ಲಣದ ಬೆನ್ನ ಮೇಲೆ ಒಂದು ಸಹಾಯಕ ಜಾರುಪೀಠವನ್ನು ಲಗತ್ತಿಸಿರುತ್ತದೆ. ಯಂತ್ರಪೀಠ ಒದಗಿಸುವ ಗರಿಷ್ಠ ಉದ್ದಕ್ಕಿಂತಲೂ ಸ್ವಲ್ಪ ಹೆಚ್ಚಿನ ಉದ್ದವನ್ನು ಇದರಿಂದ ಪಡೆಯಬಹುದು. ಈ ಸಹಾಯಕ ಜಾರುಪೀಠದ ಮೇಲೆ ಅನೇಕ ಆಯುಧಗಳನ್ನು ಒಟ್ಟಿಗೇ ಹಿಡಿಯಬಲ್ಲ ಒಂದು ಆಯುಧ ಶೀರ್ಷಕವಿದೆ (ಟೂಲ್ ಹೆಡ್), ಸೂಕ್ತ ಏರ್ಪಾಡಿನಿಂದಾಗಿ ಒಂದು ಕ್ರಿಯೆ ಮುಗಿದ ಒಡನೆ ಆಯುಧ ಶೀರ್ಷಕ ತಾನಾಗಿ ಸ್ವಲ್ಪ ತಿರುಗಿ, ಪಕ್ಕದ ಆಯುಧಕ್ಕೆ ಕ್ರಿಯೆಯನ್ನು ನಡೆಸಲು ಹಾದಿಮಾಡಿಕೊಡುತ್ತದೆ. ಎಷ್ಟು ಆಯುಧಗಳನ್ನು ಒಮ್ಮೆಗೇ ಜೋಡಿಸಬೇಕಾಗುತ್ತದೋ ಅಷ್ಟು ಮುಖಗಳುಳ್ಳ ಶೀರ್ಷಕವನ್ನೇ ಬಳಸಬೇಕು (ಚತುರ್ಮುಖ, ಷಣ್ಮುಖ ಇತ್ಯಾದಿ). ಬಳಸಬೇಕಾದ ಆಯುಧಗಳಿಗೆ ತಕ್ಕಂತೆ ವಿವಿಧ ರೀತಿಯ ಆಯುಧ ಪಿಡಿಗಳನ್ನೂ ಉಪಯೋಗಿಸಬೇಕು. ಮೇಲೆ ವಿವರಿಸಿದ ಏರ್ಪಾಡಿನಲ್ಲಿ ಸಹಾಯಕ ಜಾರುಪೀಠವನ್ನು ಕೈಬಿಟ್ಟರೆ ಇದು ಟರೆಟ್ ಕಡೆತಯಂತ್ರವಾಗುವುದೆಂಬುದನ್ನು ಇಲ್ಲಿ ಗಮನಿಸಬೇಕು. ಈ ಏರ್ಪಾಡಿನ ಜೊತೆಗೆ, ಸಾಮಾನ್ಯ ಕಡೆತಯಂತ್ರದಲ್ಲಿರುವ ಹಲ್ಲಣ ಸಹ ಇರುತ್ತದೆ. ಅಂದರೆ ಒಟ್ಟು ಎರಡು ಹಲ್ಲಣಗಳಿವೆ ಎಂದಾಯಿತು. ಇವುಗಳಿಗೆ ಲಗತ್ತಿಸಿರುವ ಆಯುಧಗಳ ಶೀರ್ಷಕದ ಇತರ ಆಯುಧಗಳ ಜೊತೆಗೆ ಅಥವಾ ಪ್ರತ್ಯೇಕವಾಗಿ ಕ್ರಿಯೆಗಳನ್ನು ನಡೆಸಬಹುದು.

ಅನುಕೂಲತೆಗಳು : 1. ಒಮ್ಮೆಗೇ ಅನೇಕ ಆಯುಧಗಳನ್ನು ಜೋಡಿಸಬಹುದಾದ್ದರಿಂದ ಕ್ರಿಯೆಯ ತರುವಾಯ ಆಯುಧವನ್ನು ಬಿಚ್ಚಿ ಆ ಸ್ಥಳದಲ್ಲಿ ಹೊಸ ಆಯುಧವನ್ನಿಟ್ಟು ಕಾರ್ಯವನ್ನು ಮುಂದುವರಿಸುವ ತೊಂದರೆ ತಪ್ಪುತ್ತದೆ. 2.ಒಂದು ಕ್ರಿಯೆ ಮುಗಿದ ಒಡನೆ ಶೀರ್ಷಕ ತಾನಾಗಿಯೇ ತಿರುಗಿ, ಕಾರ್ಯಸ್ಥಾನಕ್ಕೆ ಹೊಸ ಆಯುಧ ಬಂದು ನಿಲ್ಲಲು ದಾರಿಮಾಡಿಕೊಟ್ಟು ಆಯುಧವನ್ನು ಬಿಚ್ಚಿ ಹಾಕುವಾಗ ಆಗುವ ತಪ್ಪುಗಳನ್ನು ನಿವಾರಿಸುತ್ತದೆ. 3.ಒಟ್ಟಿಗೇ ಭಿನ್ನರೀತಿಯ ಅನೇಕ ಕ್ರಿಯೆಗಳನ್ನು ನಡೆಸಬಹುದು. ಈ ಎಲ್ಲ ಕಾರಣಗಳಿಂದ ವಿಳಂಬ ತಪ್ಪಿ ಕಾಲ ಉಳಿತಾಯವಾಗುತ್ತದೆ. 
                                                              (ಕೆ.ಆರ್.ಎಂಒ).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ